ಗೊಡೆಹೂ-
ಫ್ರೆಂಚ್ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕರಲ್ಲೊಬ್ಬನಾಗಿದ್ದ. ಭಾರತದಲ್ಲಿ ಫ್ರೆಂಚ್ ಗವರ್ನರ್-ಜನರಲ್ ಆಗಿದ್ದ ಡ್ಯುಪ್ಲೆಕ್ಸನನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಅಲ್ಲಿ ಫ್ರೆಂಚರ ಸ್ಥಿತಿಗತಿಗಳ ವಿಚಾರಣೆ ನಡೆಸಲು ಫ್ರೆಂಚ್ ಕಂಪನಿ ಅವನನ್ನು 1754ರಲ್ಲಿ ಭಾರತಕ್ಕೆ ಕಳುಹಿಸಿತು. ಅವನು 1754ರ ಆಗಸ್ಟ್ ತಿಂಗಳಲ್ಲಿ ಪಾಂಡಿಚೆರಿಯನ್ನು ತಲುಪಿದ. ಆ ವೇಳೆಗೆ ದಕ್ಷಿಣ ಭಾರತದಲ್ಲಿ ಫ್ರೆಂಚರ ಬಲ ಕುಂದುತ್ತಿತ್ತು. ಡ್ಯುಪ್ಲೆಕ್ಸ್ ಆ ಕಾಲದ ವಿವಾದಾಸ್ಪದ ವ್ಯಕ್ತಿಯಾಗಿದ್ದ. ಅವನ ರಾಷ್ಟ್ರಪ್ರೇಮ, ನಿಷ್ಠೆ, ಸಾಹಸ ಮತ್ತು ಗುರಿಗಳು ಫ್ರೆಂಚರ ದೃಷ್ಟಿಯಲ್ಲಿ ಸಂಶಯಾತೀತವಾಗಿದ್ದುವಾದರೂ ಅವನು ತನ್ನ ಯೋಜನೆಗಳನ್ನು ಕಾರ್ಯಗತಮಾಡಿದ ವಿಧಾನ ಮಾತ್ರ ದೋಷಯುಕ್ತವಾಗಿದ್ದುವು. ಪರಿಸರದ ಪ್ರತಿಕೂಲತೆಯಿಂದಾಗಿ ವಿಫಲತೆಗೊಂಡಿದ್ದುವು. ಗೊಡೆಹೂ ಭಾರತಕ್ಕೆ ಬಂದದ್ದು ಇಂಥ ಹಿನ್ನೆಲೆಯಲ್ಲಿ.

	ಗೊಡೆಹೂ ಭಾರತಕ್ಕೆ ಬಂದೊಡನೆಯೇ ಇಂಗ್ಲಿಷರೊಂದಿಗೆ ಯುದ್ಧ ನಿಲ್ಲಿಸಿದ. 1755ರ ಜನವರಿಯಲ್ಲಿ ಅವರೊಂದಿಗೆ ತಾತ್ಕಾಲಿಕ ಕೌಲೊಂದನ್ನು ಮಾಡಿಕೊಂಡ. ಭಾರತದ ರಾಜರ ವ್ಯವಹಾರಗಳಲ್ಲಿ ಕೈಹಾಕುವುದಿಲ್ಲವೆಂದು ಎರಡು ಪಕ್ಷಗಳೂ ಒಪ್ಪಿಕೊಂಡವು. ಇಂಗ್ಲಿಷರ ಅಧೀನ ಪ್ರದೇಶಗಳಿಗೆ ಫ್ರೆಂಚರೂ ಫ್ರೆಂಚರಿಗೆ ಸೇರಿದ್ದ ಪ್ರದೇಶಗಳಿಗೆ ಇಂಗ್ಲಿಷರೂ ಮನ್ನಣೆ ನೀಡಬೇಕೆಂಬುದು ಒಪ್ಪಂದದ ಷರತ್ತುಗಳಲ್ಲೊಂದು. ಈ ಕೌಲನ್ನು ಎರಡು ಕಂಪನಿಗಳೂ ಅನುಮತಿಸಬೇಕಾಗಿತ್ತು. ಆದರೆ ಅಷ್ಟರಲ್ಲಿ (1756) ಯೂರೋಪಿನಲ್ಲಿ ಏಳು ವರ್ಷಗಳ ಯುದ್ಧ ಪ್ರಾರಂಭವಾದ್ದರಿಂದ ಫ್ರಾನ್ಸ್ ಮತ್ತು ಬ್ರಿಟನ್ ಪುನಃ ಯುದ್ಧಕ್ಕೆ ಇಳಿದುವು. ತತ್ಫಲವಾಗಿ ಈ ಕೌಲು ಕಾರ್ಯಗತವಾಗಲೇ ಇಲ್ಲ.

	ಗೊಡೆಹೂ ಮಾಡಿಕೊಂಡ ಒಪ್ಪಂದ ದೇಶದ ಅವನತಿಗೆ ಮತ್ತು ರಾಷ್ಟ್ರದ ಅವಮಾನಕ್ಕೆ ಮಾಡಿದ ರುಜು ಎಂದು ಡ್ಯುಪ್ಲೆಕ್ಸ್ ಟೀಕಿಸಿದ. ಈ ಪ್ರಸಂಗದ ಬಗ್ಗೆ ಇತಿಹಾಸಕಾರರ ಅಭಿಪ್ರಾಯ ವಿಭಿನ್ನವಾದ್ದು. ತನ್ನ ಅಸಮರ್ಥ ಸೈನ್ಯದಿಂದಾಗಲಿ ಭಾರತದಲ್ಲಿ ಫ್ರೆಂಚರ ಅಂದಿನ ಸ್ಥಿಗತಿಗಳಿಂದಾಗಲಿ ಗೊಡೆಹೂ ಬ್ರಿಟಿಷರ ವಿರುದ್ಧ ಯುದ್ಧಹೂಡುವ ಸ್ಥಿತಿಯಲ್ಲಿರಲಿಲ್ಲವೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಆರ್ಥಿಕವಾಗಿಯಾಗಲಿ ಸೈನ್ಯಬಲದಲ್ಲಿಯಾಗಲಿ ಫ್ರೆಂಚರು ಬ್ರಿಟಿಷರಿಗೆ ಸರಿಗಟ್ಟುವಂತಿರಲಿಲ್ಲ. ಭಾರತದಲ್ಲಿ ಫ್ರೆಂಚರ ವಸಾಹತು ನಿರ್ಮಿಸುವ ಆಶೆ ಕೊನೆಗೊಡಂದ್ದು ಏಳು ವರ್ಷಗಳ ಯುದ್ಧದಿಂದಲೇ ಹೊರತು ಗೊಡೆಹೂ ಮಾಡಿಕೊಂಡ ಕೌಲಿನಿಂದಲ್ಲವೆಂಬುದು ಕೆಲವು ಇತಿಹಾಸಕಾರರ ಅಭಿಪ್ರಾಯ. ಆದರೂ ಗೊಡೆಹೂ ಮಾಡಿಕೊಂಡ ಈ ಒಪ್ಪಂದ ಫ್ರೆಂಚರಿಗೆ ಯಾವ ರೀತಿಯಲ್ಲೂ ಅನುಕೂಲವಾಗುವಂತಿರಲಿಲ್ಲವೆಂಬುದು ನಿಜ.

	ಗೊಡೆಹೂ ಡ್ಯುಪ್ಲೆಕ್ಸ್‍ನನ್ನು ಹುದ್ದೆಯಿಂದ ತೆಗೆದುಹಾಕಿದ್ದು ಮತ್ತು ಅನಂತರ ಅವನ ಬಗ್ಗೆ ವ್ಯವಹರಿಸಿದ ರೀತಿ-ಇವು ಡ್ಯುಪ್ಲೆಕ್ಸ್‍ನ ಕೊನೆಯ ಕಾಲದ ದುಃಸ್ಥಿತಿಗೆ ಕಾರಣವಾದುದೆಂದು ಒಂದು ವಾದವಿದೆ. ಆದರೆ ಡ್ಯುಪ್ಲೆಕ್ಸ್ ಸ್ವದೇಶಕ್ಕೆ ಮರಳಲು ಗೊಡೆಹೂ ಸಾಕಷ್ಟು ಸಹಾಯ ಮಾಡಿದ. ಫ್ರೆಂಚ್ ಕಂಪನಿ ಡ್ಯುಪ್ಲೆಕ್ಸ್‍ನನ್ನು ಕಡೆಗಣಿಸಿದ್ದರಿಂದ ಅವನಿಗೆ ಆ ಗತಿ ಬಂತೇ ಹೊರತು ಗೊಡೆಹೂನಿಂದಲ್ಲವೆಂಬುದು ಹಲವು ಇತಿಹಾಸಕಾರರ ಅಭಿಮತ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ